ವೀರಕೇಸರಿ ಸೀತಾರಾಮಶಾಸ್ತ್ರೀ
	1893-1971. ಖ್ಯಾತ ಪತ್ರಿಕೋದ್ಯಮಿ, ಸಾಹಿತಿ ಮತ್ತು ರಾಜಕಾರಣಿ. 1893ರಲ್ಲಿ ನಂಜನಗೂಡಿನಲ್ಲಿ ಜನಿಸಿದರು. ಮದ್ದೂರಿನ ನಾಗೇಶಶಾಸ್ತ್ರೀಗಳು ಇವರ ತಂದೆ. ತಾಯಿ ಪಾರ್ವತಮ್ಮ ನವರು ನಂಜನಗೂಡಿನವರು. ಶಾಸ್ತ್ರೀಗಳ ಸೋದರಮಾವಂದಿರಲ್ಲಿ ಒಬ್ಬರಾದ ಶ್ರೀಕಂಠಶಾಸ್ತ್ರೀಗಳು ಶೃಂಗೇರಿ ಮಠದ ಪ್ರತಿನಿಧಿಯಾಗಿದ್ದರು. ಇನ್ನೊಬ್ಬರು ಕೃಷ್ಣಶಾಸ್ತ್ರೀಗಳು ಮೈಸೂರು ಆಸ್ಥಾನದಲ್ಲಿದ್ದರು. ಝಾನ್ಸಿ ಲಕ್ಷ್ಮೀಬಾಯಿಯ ದತ್ತು ಮಗ ದಾಮೋದರರಾಯ ಶೃಂಗೇರಿಗೆ ಬಂದಿದ್ದಾಗ ಶಾಸ್ತ್ರೀಯವರು ಆತನನ್ನು ಭೇಟಿಯಾಗಿದ್ದರು. ಇದರಿಂದಾಗಿ ಅವರಲ್ಲಿ ಸುಪ್ತವಾಗಿದ್ದ ರಾಜಕೀಯ ಪ್ರಜ್ಞೆ ಬೆಳೆಯಲು ಕಾರಣವಾಯಿತು. ಪುರಿಯ ಧರ್ಮಪೀಠವನ್ನೇರಿದ ಶ್ರೀ ವೆಂಕಟರಮಣ ಸರಸ್ವತಿಯವರು ಇವರ ಸಹವಾಸಿಗಳಾಗಿದ್ದರು.

	ಇವರು ತಮ್ಮ ಬಾಲ್ಯವನ್ನು ಕಳೆದದ್ದು ಶೃಂಗೇರಿಯಲ್ಲಿ. ಅಲ್ಲಿನ ಧಾರ್ಮಿಕ ಹಾಗೂ ಪಂಡಿತ ಪರಿಸರ ಇವರ ವ್ಯಕ್ತಿತ್ವ ವಿಕಸನಕ್ಕೆ ಸಹಾಯಕ ವಾಯಿತು. ಬಾಲಕರಾಗಿದ್ದಾಗ ಒಮ್ಮೆ ಚಿಣ್ಣಿಕೋಲು ಆಟವಾಡುತ್ತಿದ್ದಾಗ ಚಿಣ್ಣಿಯ ಏಟಿನಿಂದ ಒಂದು ಕಣ್ಣಿನ ದೃಷ್ಟಿಯನ್ನು ಕಳೆದುಕೊಂಡರು. ಇವರು ಶೃಂಗೇರಿಯಲ್ಲಿದ್ದಾಗಲೇ ಆರ್ಯ ಮಹಿಳಾ ಎಂಬ ಮಾಸಪತ್ರಿಕೆ ಯನ್ನು ಪ್ರಾರಂಭಿಸಿ ಸುಮಾರು ಒಂದು ವರ್ಷಕಾಲ ನಡೆಸಿಕೊಂಡು ಬಂದರು. ಸು. 1919ರಲ್ಲಿ ಇವರು ಶೃಂಗೇರಿಯಿಂದ ಬೆಂಗಳೂರಿಗೆ ಬಂದು ಶಂಕರಮಠದ ಭಾರತೀಯ ಗೀರ್ವಾಣ ಪ್ರೌಢಶಾಲೆಯ ಸಂಸ್ಕøತ ವಿಭಾಗದಲ್ಲಿ ಕೆಲಸ ಮಾಡಲಾರಂಭಿಸಿದರು. ಮುಂದೆ ಸ್ವಲ್ಪಕಾಲ ತಿರುಚ್ಚಿರಾಪ್ಪಲ್ಲಿಯಲ್ಲಿ ಒಂದು ಚಿತ್ರಮಂದಿರವನ್ನು ಕಟ್ಟಿದರು. ಕಾವೇರಿ ನದಿ ಪ್ರವಾಹದಲ್ಲಿ ಆ ಚಿತ್ರಮಂದಿರ ಕೊಚ್ಚಿಹೋಗಿ ಇವರಿಗೆ ಅಪಾರ ನಷ್ಟವಾಯಿತು. ಇದರಿಂದ ಬೇಸರಗೊಂಡು ಇವರು ಕಾಶೀಯಾತ್ರೆ ಹೊರಟು, ಭಾರತದ ವಿದ್ಯಾಕೇಂದ್ರಗಳನ್ನು ಸಂದರ್ಶಿಸಿ, ಪಂಡಿತರೊಡನೆ ವಿಚಾರ ವಿನಿಮಯ ಮಾಡಿಕೊಂಡು ಅಪಾರ ಅನುಭವದೊಡನೆ ಹಿಂದಿರುಗಿದರು. ಈ ಸಮಯದಲ್ಲೇ ಪಂಡಿತ ಮದನಮೋಹನ ಮಾಳವೀಯರ ಪರಿಚಯವಾಗಿ ಸ್ನೇಹ ಬೆಳೆಯಿತು. ಮಾಳವೀಯರು ಇವರನ್ನು ಗಾಂಧೀಜಿಗೆ ಪರಿಚಯ ಮಾಡಿಸಿದರು. ಗಾಂಧೀಜಿ ಇವರನ್ನು ಸನಾತನ ಶಾಸ್ತ್ರೀಜಿ ಎಂದು ಸಂಬೋಧಿಸುತ್ತಿದ್ದರಂತೆ.		
	(ಎಮ್.ಎಸ್.ಎಮ್.)

	ಸಂಸ್ಕøತ ಭಾಷೆ ಸಾಹಿತ್ಯಗಳನ್ನು ಚೆನ್ನಾಗಿ ತಿಳಿದಿದ್ದ ಇವರು ಆರಂಭದಲ್ಲಿ ಸಂಸ್ಕøತದಲ್ಲೇ ಕಾವ್ಯರಚನೆಗೆ ಪ್ರಯತ್ನಿಸಿದ್ದರಂತೆ. ಸು. 14-15 ವರ್ಷದಲ್ಲೇ ಸಾಧ್ವಿ ಪತ್ರಿಕೆಗೆ ಲೇಖನಗಳನ್ನು ಬರೆಯುತ್ತಿದ್ದರಂತೆ. ಸ್ವಲ್ಪಕಾಲ ಸಂಪದಭ್ಯುದಯ ಮತ್ತು ಸಾಧ್ವಿ ಪತ್ರಿಕೆಗಳಲ್ಲಿ ಕೆಲಸ ಮಾಡಿ 1927ರಲ್ಲಿ ಗ್ರಾಮಜೀವನ ಪತ್ರಿಕೆಯ ಸಂಪಾದಕರಾದರು. ಸ್ವತಂತ್ರ ಮನೋವೃತ್ತಿಯ ಇವರು ಆ ಪತ್ರಿಕೆಯ ಮೂಲಕ ಆಳುವ ಸರ್ಕಾರಕ್ಕೆ ಅಡಿಯಾಳಾಗಿ ರಲು ಒಪ್ಪಲಿಲ್ಲ. ಜೊತೆಗೆ ಗಾಂಧೀಜಿಯವರ ಪ್ರಭಾವಕ್ಕೆ ಒಳಗಾಗಿದ್ದ ಇವರು ಅವರ ಕರೆಗೆ ಓಗೊಟ್ಟು 1928 ಮೇ 2ರಂದು ವೀರಕೇಸರಿ ಎಂಬ ಪತ್ರಿಕೆಯನ್ನು ಪ್ರಾರಂಭಿಸಿದರು. ವೀರಕೇಸರಿಯ ಕರೆ ಜನತೆಯನ್ನು ಮುಟ್ಟಿತು. ಅದರ ಗರ್ಜನೆ ಸರ್ಕಾರಕ್ಕೆ ಭಯ ತಂದಿತು. ರಾಷ್ಟ್ರದ ಸ್ವಾತಂತ್ರ್ಯಕ್ಕೆ ಪಣತೊಟ್ಟಿದ್ದ ಈ ಪತ್ರಿಕೆ ಸ್ವಾತಂತ್ರ್ಯಾ ನಂತರವೂ ಕೆಲವು ಕಾಲ ಪ್ರಕಟವಾಗುತ್ತಿತ್ತು. ನಾಡಿನ ಸಾರ್ವಜನಿಕ ಜೀವನವನ್ನು ಶುಭ್ರಗೊಳಿಸುವುದು ಪತ್ರಿಕೆಯ ಧ್ಯೇಯ ವಾಗಿತ್ತು. ವೀರಕೇಸರಿಯ ನಿರ್ಭೀತ ಬರೆವಣಿಗೆಯಿಂದ ಇವರು ವೀರಕೇಸರಿ ಸೀತಾರಾಮಶಾಸ್ತ್ರೀ ಗಳೆಂದು ಪ್ರಸಿದ್ಧರಾದರು. ಅನೇಕ ಸಂದರ್ಭಗಳಲ್ಲಿ ಸರ್ಕಾರದ ಕಿರುಕುಳ ಸಹಿಸಲಾರದೆ ರಾಜ್ಯದ ಹೊರಗಡೆಯಿಂದ ಪತ್ರಿಕೆಯನ್ನು ಪ್ರಕಟಿಸಿದ ಸಾಹಸ ಇವರದು. ಇವರು ಕೆಲವು ಕಾಲ ವಾರ್ತಾ ಎಂಬ ಪತ್ರಿಕೆಯನ್ನೂ ಪ್ರಕಟಿಸುತ್ತಿದ್ದರು.

	ಮೈಸೂರಿನಲ್ಲಿ ಕಾಂಗ್ರೆಸ್ ಸಂಸ್ಥೆಗೆ ಅಸ್ತಿಭಾರ ಹಾಕಿದವರಲ್ಲಿ ಇವರೂ ಒಬ್ಬರು. ಇದರಿಂದಾಗಿ ಕೆಲವು ಬಾರಿ ಸೆರೆಮನೆಗೂ ಹೋಗಿಬಂದರು. ಇಷ್ಟೆಲ್ಲ ಕಾರ್ಯಕ್ರಮಗಳ ಮಧ್ಯೆ ಇವರ ಸಾಹಿತ್ಯರಚನೆ ನಿರಾತಂಕವಾಗಿ ನಡೆಯಿತು. ಇವರು ಸು. 60 ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಅವುಗಳಲ್ಲಿ ಹೆಚ್ಚಿನವು ಕಾದಂಬರಿಗಳು. ದೌಲತ್, ಶ್ರೀರಂಗರಾಯ, ನಗರದ ರಾಣಿ, ಬಿದನೂರು ರಾಣಿ, ಗೋಲ್ಕೊಂಡ ಪತನ, ರಾಜಪಂಜರ, ಆದಿಲ್‍ಷಾಹಿಯ ಕಡೆಯ ದಿನಗಳು, ಛತ್ರಪತಿ ಶಿವಾಜಿ, ಯವನವಿದ್ರೋಹಿ ಶಿವಾಜಿ-ಈ ಐತಿಹಾಸಿಕ ಕಾದಂಬರಿಗಳು ಪ್ರಸಿದ್ಧವಾಗಿವೆ. ಸರಳ ಗದ್ಯದಲ್ಲಿ ಇವರು ವಾಲ್ಮೀಕಿ ರಾಮಾಯಣವನ್ನು ಬರೆದಿದ್ದಾರೆ. ಶ್ರೀಮದ್ಭಾಗವತವನ್ನೂ ಅದೇ ರೀತಿ ಪ್ರಕಟಿಸಬೇಕೆಂದಿದ್ದು ಅದರ ಪ್ರಥಮ ಭಾಗವನ್ನು ಪ್ರಕಟಿಸಿದ್ದರು. ದ್ವಿತೀಯ ಭಾಗವನ್ನು ಪ್ರಕಟಿಸುವ ಮೊದಲೇ ಇವರು ಬೆಂಗಳೂರಿನಲ್ಲಿ 1971 ಜನವರಿ 5ರಂದು ನಿಧನರಾದರು.

	ಇವರು ಹತ್ತೊಂಬತ್ತನೆಯ ವಯಸ್ಸಿನಲ್ಲೇ ಮದುವೆಯಾದರು. ಪತ್ನಿ ಸುಬ್ಬಮ್ಮನವರು. ಇವರಿಗೆ ಒಂಬತ್ತು ಮಕ್ಕಳು. ಕನ್ನಡದ ಪ್ರಸಿದ್ಧ ಪತ್ತೇದಾರಿ ಕಾದಂಬರಿಕಾರರಲ್ಲಿ ಒಬ್ಬರಾದ ಮ. ರಾಮಮೂರ್ತಿ ಇವರ ಹಿರಿಯ ಮಗ.			
	*
   *

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ